ಮದುವೆಗಾಗಿ ಸಾಲ ಮಾಡಬೇಡಿ – ಮಧ್ಯಮ ವರ್ಗದ ಕುಟುಂಬಗಳು ತಿಳಿದಿರಲೇಬೇಕಾದ ಸತ್ಯ..!

“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಅನ್ನೋ ಗಾದೆ ಇವತ್ತಿನ ದಿನಗಳಲ್ಲಿ ಬರೀ ಸಾಲದ ಕಥೆಗಳನ್ನೇ ಹೇಳ್ತಿದೆ. ಇವತ್ತಿನ ಯುವ ಪೀಳಿಗೆ ಮದುವೆ, ಮನೆ ಕಟ್ಟೋದು, ಕಾರ್ ತಗೊಳೋದಕ್ಕೂ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.

ಆನಂತರ ಆ ಸಾಲ ತೀರಿಸುವ ಟೆನ್ಷನ್‌ನಲ್ಲಿ ಇಡೀ ಜೀವನವನ್ನೇ ಕಳೆದುಬಿಡ್ತಾರೆ.

ಆದರೆ, ನಿಜವಾಗ್ಲೂ ಮದುವೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡೋದು ಅಗತ್ಯಾನಾ?

ಸಾಲದ ಸುಳಿಯಲ್ಲಿ ಸಿಲುಕಬೇಡಿ!

ಮದುವೆ ಮಾಡ್ಕೊಳ್ತೀವಿ, ಮನೆ ಕಟ್ತೀವಿ, ಕಾರ್ ತಗೋತೀವಿ ಅಂದ್ರೆ ಸಾಲ ಮಾಡಲೇಬೇಕು ಅಂತ ಈಗಿನ ಯುವಜನತೆ ಅಂದುಕೊಳ್ತಿದೆ. ಆದರೆ ಈ ಸಾಲದ ಬಲೆಗೆ ಸಿಲುಕಿ ಜೀವನಪೂರ್ತಿ ತಲೆಬಾಗೋದು ತಪ್ಪು.

ಮುಂದಿನ ಐದಾರು ವರ್ಷಗಳಲ್ಲಿ ಅಥವಾ ಹತ್ತು ವರ್ಷಗಳಲ್ಲಿ ದುಡಿಯಬಹುದಾದ ದುಡ್ಡನ್ನ ಇವತ್ತೇ ಅಡ್ವಾನ್ಸ್ ಆಗಿ ತಗೊಂಡು ಖರ್ಚು ಮಾಡೋದೇ ಸಾಲ. ಈ ಸಾಲದ ಭಾರ ನಮ್ಮ ಜೀವನದ ನೆಮ್ಮದಿಯನ್ನೇ ಹಾಳು ಮಾಡಬಹುದು.

ಹಾಗಾಗಿ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕು.

ನವಿಲು ಕುಣಿದರೆ ಕೆಂಬೂತೇಕೆ ಪುಕ್ಕ ತೆರೆಯಬೇಕು?

ಶ್ರೀಮಂತರು ಬೇಕಾದಷ್ಟು ಖರ್ಚು ಮಾಡ್ಕೊಳ್ಳಿ, ದೊಡ್ಡ ವೆಡ್ಡಿಂಗ್ ಮಾಡ್ಕೊಳ್ಳಿ.

ಅವರು ಸಾಲ ಮಾಡಿರೋದಿಲ್ಲ, ಅವರಿಗೆ ಅದೊಂದು ಸಣ್ಣ ಖರ್ಚು.

ಆದರೆ, ಅವರು ಮಾಡಿದರು ಅಂತ ನಾವೂ ಪ್ರೀ-ವೆಡ್ಡಿಂಗ್ ಶೂಟ್ (Pre-Wedding Shoot), ವೆಡ್ಡಿಂಗ್ ಶೂಟ್ (Wedding Shoot) ಅಂತ ದುಬಾರಿ ಖರ್ಚು ಮಾಡೋದು ಬೇಡ. “ನವಿಲು ಕುಣಿತು ಅಂತ ಕೆಂಬೂತ ಪುಕ್ಕ ತೆರೆಯಿತು” ಅನ್ನೋ ಗಾದೆ ಮಾತು ಇಲ್ಲಿಗೆ ಸರಿಯಾಗಿ ಅನ್ವಯ ಆಗುತ್ತೆ. ನಮ್ಮ ಆರ್ಥಿಕ ಶಕ್ತಿಗೆ ಮೀರಿ ಖರ್ಚು ಮಾಡೋದು ದೊಡ್ಡ ತಪ್ಪು.

ಆಡಂಬರದ ಕನ್ನಡ ಮದುವೆಗಳು: ಇದು ನಮ್ಮ ಸಂಸ್ಕೃತಿಯೇ?

ಇವತ್ತಿನ ನಮ್ಮ ಕನ್ನಡ ಮದುವೆಗಳು ತುಂಬಾನೇ ಬದಲಾಗಿ ಹೋಗಿವೆ.

ಮೆಹಂದಿ, ಸಂಗೀತ, ಇನ್ನೂ ಏನೇನೋ ಆಡಂಬರಗಳು ಸೇರಿಕೊಂಡಿವೆ.

ಇವೆಲ್ಲ ಹಿಂದಿ ಸಿನಿಮಾಗಳ ಪ್ರಭಾವ. ಆ ಸಿನಿಮಾ ಮೂರು ಗಂಟೆಯಲ್ಲಿ ಮುಗಿದುಹೋಗುತ್ತೆ, ಅಲ್ಲಿ ನಟಿಸಿದವರು ಕೋಟಿಗಟ್ಟಲೆ ಸಂಪಾದನೆ ಮಾಡ್ತಾರೆ. ಆದರೆ, ನೀವು 10 ಲಕ್ಷ ರೂಪಾಯಿ ಸಾಲ ಮಾಡ್ಕೊಂಡು ಆ ಸಿನಿಮಾ ರೀತಿ ಆಗಬೇಕು ಅಂತ ಕನಸು ಕಾಣೋದು ಎಷ್ಟರ ಮಟ್ಟಿಗೆ ಸರಿ? ಇದು ನಮ್ಮ ಹಣಕಾಸು ಭವಿಷ್ಯಕ್ಕೆ ದೊಡ್ಡ ಅಪಾಯ.

ಒಳ್ಳೆಯ ಸಾಲ ಯಾವುದು? ಕೆಟ್ಟ ಸಾಲ ಯಾವುದು?

ಕೆಲವು ಸಾಲಗಳು “ಒಳ್ಳೆಯ ಸಾಲ” (Good Debt) ಆಗಿರುತ್ತೆ.

ಉದಾಹರಣೆಗೆ, ಸ್ವಂತ ಮನೆ ಕಟ್ಟಿಸುವುದಕ್ಕೆ ಲೋನ್ ಪಡೆಯೋದು. ಸಂಪೂರ್ಣವಾಗಿ ಹಣ ಉಳಿಸಿ ಮನೆ ಕಟ್ಟೋದು ಎಲ್ಲರಿಗೂ ಸಾಧ್ಯವಿಲ್ಲ.

ಆದರೆ ಮದುವೆಗಾಗಿ ಸಾಲ ಮಾಡೋದು “ಕೆಟ್ಟ ಸಾಲ” (Bad Debt).

ಯಾಕಂದ್ರೆ ಮದುವೆ ಕೇವಲ ಎರಡು ದಿನದ ಕಾರ್ಯಕ್ರಮ, ಆದರೆ ಅದರ ಸಾಲದ ಕಂತುಗಳನ್ನು ವರ್ಷಗಟ್ಟಲೆ ಕಟ್ಟಬೇಕು. ಇದು ನಮ್ಮ ಲೈಫ್ ಸ್ಟೈಲ್ (Lifestyle) ಮೇಲೆ ನೆಗೆಟಿವ್ (Negative) ಪರಿಣಾಮ ಬೀರುತ್ತೆ.

ಮದುವೆ ಸಾಲ vs ಹೂಡಿಕೆಯ ಶಕ್ತಿ

  • ಸಾಲ ತೀರಿಸುವಾಗ ಭವಿಷ್ಯಕ್ಕೆ ಹಣ ಉಳಿಯಲ್ಲ.
  • ಹೂಡಿಕೆಯಿಂದ ಆರ್ಥಿಕ ಸ್ವಾತಂತ್ರ್ಯ ಸಿಗುತ್ತೆ.

ಸಾಲ ಒಂದು ಗುರುತ್ವಾಕರ್ಷಣ ಶಕ್ತಿಯಂತೆ

ಸಾಲ ಅನ್ನೋದು ನಿಮ್ಮನ್ನ ಯಾವಾಗಲೂ ಕೆಳಕ್ಕೆ ಎಳೆಯುತ್ತಲೇ ಇರುತ್ತೆ.

ಕೈಗಳಿಗೆ, ಕಾಲುಗಳಿಗೆ ತಲಾ 2 ಕೆ.ಜಿ ಕಲ್ಲುಗಳನ್ನು ಕಟ್ಟಿಕೊಂಡು ಓಡೋಕೆ ಪ್ರಯತ್ನಿಸಿದ್ರೆ ಹೇಗೆ ಅನಿಸುತ್ತೆ? ಸಾಲ ಕೂಡ ಹಾಗೆಯೇ. ಅದು ನಿಮ್ಮನ್ನ ಮಾನಸಿಕವಾಗಿ, ಆರ್ಥಿಕವಾಗಿ ಕೆಳಕ್ಕೆ ಎಳೆಯುತ್ತೆ.

ಚಿಕ್ಕ ವಯಸ್ಸಿನಲ್ಲಿಯೇ ಮದುವೆಗೋಸ್ಕರ ಸಾಲ ಮಾಡಿಕೊಂಡರೆ, ಮುಂದಿನ ಅನೇಕ ವರ್ಷಗಳ ಕಾಲ ಆರ್ಥಿಕ ಹೊರೆಯಿಂದ ಹೊರಬರಲು ಕಷ್ಟವಾಗುತ್ತೆ. ಇದರಿಂದ ಜೀವನದಲ್ಲಿ ಪ್ರಗತಿ ಸಾಧಿಸಲು ಕಷ್ಟವಾಗಬಹುದು.

ಕುಟುಂಬದ ಒತ್ತಡ ಮತ್ತು ಸಂಬಂಧಗಳ ಬಿರುಕು

ಫ್ಯಾಮಿಲಿ ಪ್ರೆಷರ್ (Family pressure) ನಿಂದ ಅನೇಕರು ದುಬಾರಿ ಮದುವೆಗೆ ಮುಂದಾಗುತ್ತಾರೆ.

ನಮ್ಮ ಫ್ಯಾಮಿಲಿಗೆ ಗತ್ತು ತೋರಿಸಬೇಕು” ಅಂತ ಸಾಲ ಮಾಡ್ತಾರೆ.

ಆದರೆ ಆರಂಭದಲ್ಲಿ ಚೆನ್ನಾಗಿ ಕಾಣುವ ಈ ಭ್ರಮೆಯ ಜಗತ್ತು ವಾಸ್ತವಕ್ಕೆ ಬಂದಾಗ ಒಡೆದು ಹೋಗುತ್ತೆ. ಸಾಲದ ಒತ್ತಡದಿಂದ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಹೆಚ್ಚಾಗಬಹುದು.

“ನಾವು ಯಾವಾಗ ಪ್ರಗತಿ ಸಾಧಿಸೋದು, ಬರೀ ಸಾಲ ಕಟ್ಟೋದ್ರಲ್ಲೇ ಇದ್ದೀವಲ್ಲ” ಅನ್ನೋ ಮಾತುಗಳು ಸಂಬಂಧಗಳನ್ನೇ ಹಾಳು ಮಾಡಬಹುದು. ಕೆಲವೊಮ್ಮೆ ವಿಚ್ಛೇದನಕ್ಕೂ ಇದು ಕಾರಣವಾಗುತ್ತೆ.

“ಹಾಸಿಗೆ ಇದ್ದಷ್ಟು ಕಾಲು ಚಾಚು” – ಇದರ ನಿಜಾರ್ಥ:

ಹಾಸಿಗೆ ಇದ್ದಷ್ಟು ಕಾಲು ಚಾಚು” ಅನ್ನೋ ಗಾದೆ ಮಾತಿನ ನಿಜವಾದ ಅರ್ಥ ನಮ್ಮ ಆದಾಯದ ಮಿತಿಯೊಳಗೆ ಖರ್ಚು ಮಾಡೋದು ಅಂತ.

ಆದರೆ ಇವತ್ತಿನ ದಿನಗಳಲ್ಲಿ ಕೆಲವರು “ಹಾಸಿಗೆ ಸಣ್ಣದಿದ್ರೆ ಉದ್ದ ಮಾಡು” ಅಂತ ವಾದ ಮಾಡ್ತಾರೆ.

ಇದು ಶಾರ್ಟ್‌ಕಟ್ (Shortcut) ದಾರಿ.

ಆದರೆ, “All the shortcuts will lead to the death” ಅಂತ ಹೇಳ್ತಾರೆ. ಕಷ್ಟದ ದಾರಿ ಯಾರಿಗೂ ಬೇಡವಾದ್ರೂ, ನೇರ ಮಾರ್ಗದಲ್ಲೇ ಉಳಿತಾಯ ಮಾಡಿ, ಹೂಡಿಕೆ ಮಾಡಿ ಶ್ರೀಮಂತರಾಗಲು ಸಾಧ್ಯ.

ಸರಳ ಮದುವೆ, ಸುಖಿ ಜೀವನ: ಒಂದು ವಾಸ್ತವ

ಕೋಟಿ ಕೋಟಿ ಖರ್ಚು ಮಾಡಿದವರು ಸಹ ತಿಂಗಳಲ್ಲೇ ಡೈವೋರ್ಸ್ (Divorce) ಆಗಿರೋ ಉದಾಹರಣೆಗಳಿವೆ.

ಸರಳ ಮದುವೆ ಸುಖಿ ಜೀವನಕ್ಕೆ ಅಡಿಪಾಯ. ನಮ್ಮ ಪರಿಸ್ಥಿತಿಗೆ ತಕ್ಕಂತೆ ಬದುಕುವುದು ಮುಖ್ಯ.

ನನ್ನ ಮದುವೆಗೆ ನಾನು ಕೇವಲ 35 ರೂಪಾಯಿ ಖರ್ಚು ಮಾಡಿ ರಿಜಿಸ್ಟರ್ (Register) ಆಫೀಸ್‌ನಲ್ಲಿ ಸೈನ್ ಮಾಡಿ ಬಂದಿದ್ದೆ, ಇವತ್ತಿಗೆ 21 ವರ್ಷ ಆರಾಮಾಗಿದ್ದೇನೆ. ಹಣಕಾಸು ಆರೋಗ್ಯ ಮುಖ್ಯ ಹೊರತು, ಕೇವಲ ಪ್ರದರ್ಶನಕ್ಕಲ್ಲ.

ನಿಮ್ಮ ಫೈನಾನ್ಷಿಯಲ್ ಹೆಲ್ತ್ (Financial Health) ಮುಖ್ಯ.

ಸ್ನೇಹಿತರಿಗಾಗಿ ಸಾಲವೇ? ಮರು ಯೋಚಿಸಿ!

ನನ್ನ ಫ್ರೆಂಡ್ಸ್ (Friends) ಬರ್ತಾರೆ, ಅವರಿಗೆ ಗತ್ತು ತೋರಿಸಬೇಕು” ಅಂತ ಕೆಲವರು ಲಕ್ಷಾಂತರ ರೂಪಾಯಿ ಸಾಲ ಮಾಡ್ತಾರೆ. ಆದರೆ ನೆನಪಿಡಿ, ನೀವು ಕಷ್ಟದಲ್ಲಿ ಇದ್ದಾಗ ಆ ಯಾವ ಸ್ನೇಹಿತರೂ ಒಂದು ರೂಪಾಯಿ ಸಹಾಯ ಮಾಡೋಕೆ ಬರಲ್ಲ. ಬಂದರೂ ಅದು ಸಾಲವಾಗಿಯೇ ಇರುತ್ತೆ, ಮತ್ತು ಯಾವಾಗ ವಾಪಸ್ ಕೊಡ್ತೀಯಾ ಅಂತ ರಿಮೈಂಡ್ (Remind) ಮಾಡ್ತಾನೇ ಇರ್ತಾರೆ.

ನಿಮ್ಮ ಆರ್ಥಿಕ ಭವಿಷ್ಯಕ್ಕಿಂತ ಬೇರೆ ಯಾರದೋ ಮೆಚ್ಚುಗೆ ಮುಖ್ಯವಲ್ಲ. ನಿಮ್ಮ ಬಗ್ಗೆ ನೀವು ಯೋಚಿಸಿ, ಸ್ಮಾರ್ಟ್ (Smart) ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕೊನೆಯ ಮಾತು:

ಮಧ್ಯಮ ವರ್ಗದವರು ಮದುವೆ ಅಥವಾ ಯಾವುದೇ ಆಡಂಬರದ ಕಾರ್ಯಕ್ರಮಗಳಿಗಾಗಿ ಸಾಲದ ಸುಳಿಗೆ ಸಿಲುಕೋದು ಒಳ್ಳೆಯದಲ್ಲ. ಇದು ನಿಮ್ಮ ಸಂಪಾದನೆ, ಉಳಿತಾಯ ಮತ್ತು ಭವಿಷ್ಯದ ಆರ್ಥಿಕ ಯೋಜನೆಗಳ ಮೇಲೆ ದೊಡ್ಡ ನೆಗೆಟಿವ್ (Negative) ಪರಿಣಾಮ ಬೀರುತ್ತೆ.

ಕೇವಲ ಎರಡು ದಿನದ ಖುಷಿಗಾಗಿ ವರ್ಷಗಟ್ಟಲೆ ಕಷ್ಟ ಪಡೋದು ಅಗತ್ಯ ಇಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನ ನಡೆಸಿ. ಸರಳ ಮದುವೆ ಸುಖಿ ಜೀವನಕ್ಕೆ ನಾಂದಿ ಹಾಡುತ್ತೆ ಅನ್ನೋ ಸತ್ಯವನ್ನ ಅರಿಯಿರಿ.

ನಿಮ್ಮ ಹಣಕಾಸು ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಿ.

ಇದ್ದನು ಓದಿ:

2026 ಹೊಸ ತೆರಿಗೆ ನಿಯಮ: ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ – ಸಂಪೂರ್ಣ ಮಾಹಿತಿ..!

ದಿನಕ್ಕೆ ಕೇವಲ ₹7 ಹೂಡಿ ತಿಂಗಳಿಗೆ ₹5,000 ಪಿಂಚಣಿ ಪಡೆಯಿರಿ – ಅಟಲ್ ಪೆನ್ಷನ್ ಯೋಜನೆ ಸಂಪೂರ್ಣ ಮಾಹಿತಿ..!

ಗೃಹಲಕ್ಷ್ಮಿ 29ನೇ ಕಂತು: ಈ ಜಿಲ್ಲೆಗಳಿಗೆ ಹಣ ಬಿಡುಗಡೆ – ನಿಮ್ಮ ಜಿಲ್ಲೆ ಇದೆಯೇ ಚೆಕ್ ಮಾಡಿ..!

Leave a Comment