ನಮಸ್ಕಾರ, ಓದುಗರಿಗೆ ಸ್ವಾಗತ!
ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ಸ್ವಂತ ಮನೆ ಖರೀದಿಸಬೇಕೋ ಅಥವಾ ಬಾಡಿಗೆ ಮನೆಯಲ್ಲೇ ನೆಮ್ಮದಿಯಾಗಿರಬೇಕೋ ಅನ್ನೋ ಗೊಂದಲ ಬಹುತೇಕ ಮಧ್ಯಮ ವರ್ಗದ ಜನರನ್ನ ಕಾಡುತ್ತಲೇ ಇರುತ್ತೆ. ಅಲ್ವಾ?
ಸಾಲ ಮಾಡಿ ಕನಸಿನ ಮನೆ ಕೊಂಡರೆ ಹಣದ ತೊಂದರೆಹಗಬಹುದಾ?
ಅಥವಾ ಬಾಡಿಗೆ ಮನೆಗೆ ಸುಮ್ಮನೆ ದುಡ್ಡು ಸುರಿಯೋದಾ?
ಈ ಪ್ರಶ್ನೆಗಳಿಗೆ ಒಂದು ಸ್ಪಷ್ಟ ಉತ್ತರ ಕಂಡುಕೊಳ್ಳೋದು ಅನಿವಾರ್ಯ. ಸ್ವಂತ ಮನೆ ಕೊಳ್ಳುವ ಮುನ್ನ, ಬಾಡಿಗೆ ಮನೆಯಲ್ಲಿ ವಾಸಿಸುವ ಮುನ್ನ ಏನೆಲ್ಲಾ ಲೆಕ್ಕಾಚಾರ ಮಾಡಬೇಕು ಅನ್ನೋದನ್ನ ಇಲ್ಲಿ ಪ್ರಾಕ್ಟಿಕಲ್ ಆಗಿ ತಿಳಿಸಿದ್ದೇವೆ.
ನಿಮ್ಮ ಕನಸಿನ ಮನೆ ನಿಮಗೆ ಸಂತೋಷ ಕೊಡಬೇಕೆಂದರೆ ಈ ಮಾಹಿತಿ ಸಹಕಾರಿಯಾಗಲಿದೆ.
ಮನೆ ಅಂದ್ರೆ ಬರೀ ಕಟ್ಟಡವಲ್ಲ, ಭಾವನಾತ್ಮಕ ಸಂಬಂಧ!
ನಮಗೆ ಮನೆ ಅಂದ್ರೆ ಬರೀ ಸಿಮೆಂಟ್-ಇಟ್ಟಿಗೆಯ ಕಟ್ಟಡವಲ್ಲ, ಅದೊಂದು ‘ಮಂತ್ರಾಲಯ‘. ನಮ್ಮದೇ ಒಂದು ಸೂರಿರಬೇಕು, ಬಾಡಿಗೆ ಮನೆಯ ಕಿರಿಕಿರಿ ಇರಬಾರದು ಅನ್ನೋದು ಹಲವರ ಕನಸು.
ಮಕ್ಕಳು ನಮ್ಮಂತೆ ಬಾಡಿಗೆ ಮನೆಯಲ್ಲಿ ಇರಬಾರದು ಎಂಬುದು ಬಹುತೇಕ ಪೋಷಕರ ಆಸೆ.
ಆದರೆ, ನೆನಪಿಡಿ, ಮನೆ ಖರೀದಿ ಬರೀ ಭಾವನಾತ್ಮಕ ನಿರ್ಧಾರವಲ್ಲ.
ಇದು ಬದುಕಿನ ದೊಡ್ಡ ಆರ್ಥಿಕ ಜವಾಬ್ದಾರಿ ನಿರ್ಧಾರ. ಸರಿಯಾಗಿ ಲೆಕ್ಕಾಚಾರ ಮಾಡದೇ ಮುಂದಾದರೆ, ನಿಮ್ಮ ಕನಸಿನ ಮನೆ ನಿಮಗೆ ತುಂಬ ಭಾರವಾಗಬಹುದು. ಇದು 20-25 ವರ್ಷಗಳ ಸಾಲದ ಹೊರೆ ಆಗಬಹುದು.
ಸ್ವಂತ ಮನೆ ಖರೀದಿಯ ಗುಪ್ತ ವೆಚ್ಚಗಳು: ಡೌನ್ ಪೇಮೆಂಟ್ ಮತ್ತು ಅದರ ಅವಕಾಶ ವೆಚ್ಚ
ಮನೆ ಖರೀದಿ ಮಾಡುವಾಗ ಡೌನ್ ಪೇಮೆಂಟ್ ಮಾಡಲೇಬೇಕು.
ಉದಾಹರಣೆಗೆ, 75 ಲಕ್ಷ ರೂಪಾಯಿ ಮನೆಗೆ ಸುಮಾರು 20 ಲಕ್ಷ ಡೌನ್ ಪೇಮೆಂಟ್ ಕೊಡಬೇಕಾಗುತ್ತೆ. ಈ ಹಣವನ್ನು ನಿಮ್ಮ ಉಳಿತಾಯದಿಂದ, ಚಿನ್ನ ಮಾರಾಟ ಮಾಡಿ ಅಥವಾ ಪೋಷಕರ ಸಹಾಯದಿಂದ ಹೊಂದಿಸಬೇಕಾಗುತ್ತೆ.
ಆದರೆ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಅಂದ್ರೆ, ಈ 20 ಲಕ್ಷ ರೂಪಾಯಿ ಹಣವನ್ನು ನೀವು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಅಥವಾ ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರೆ ಹೆಚ್ಚು ಗಳಿಸುವ ಸಾಧ್ಯತೆ ಇರುತ್ತಿತ್ತು. ಇದನ್ನ ‘ಅವಕಾಶ ವೆಚ್ಚ’ ಅಂತ ಕರೆಯುತ್ತೇವೆ.
ಗೃಹ ಸಾಲದ ಬಡ್ಡಿ ಅಂದ್ರೆ ಬ್ಯಾಂಕಿಗೆ ಕಟ್ಟುವ ಬಾಡಿಗೆಯೇ?
ಬಹುತೇಕ ಜನರು ಸ್ವಂತ ಮನೆ ಕೊಳ್ಳಲು ಹೋಂ ಲೋನ್ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ, ಮನೆ ಮೌಲ್ಯದ ಶೇಕಡಾ 20ರಷ್ಟು ಡೌನ್ ಪೇಮೆಂಟ್ ಮಾಡಿ, ಉಳಿದ 80% ಮೊತ್ತಕ್ಕೆ ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ.
ಈ ಸಾಲಕ್ಕೆ ನಾವು ಕಟ್ಟುವ ಬಡ್ಡಿಯು ಒಂದು ರೀತಿಯ ‘ಬಾಡಿಗೆ’ಯೇ.
ನಾವು ಬ್ಯಾಂಕಿಗೆ ಪರೋಕ್ಷವಾಗಿ ಬಾಡಿಗೆ ಕಟ್ಟುತ್ತಿರುತ್ತೇವೆ.
ಮನೆ ನಮ್ಮದಾದರೂ, ಆರ್ಥಿಕವಾಗಿ ನಾವು ಬ್ಯಾಂಕಿಗೆ ಬಾಡಿಗೆದಾರರಾಗಿರುತ್ತೇವೆ. ಹಾಗಾಗಿ, ಗೃಹ ಸಾಲದ ಬಡ್ಡಿಯು ಸಹ ಒಂದು ವೆಚ್ಚ ಎಂಬುದನ್ನು ಮರೆಯಬೇಡಿ.
ಸ್ವಂತ ಮನೆಯ ನಿರ್ವಹಣಾ ವೆಚ್ಚ ಬಾಡಿಗೆಗಿಂತ ಜಾಸ್ತಿ!
ಸ್ವಂತ ಮನೆಯಲ್ಲಿ ನಿರ್ವಹಣಾ ವೆಚ್ಚ ಅಂದರೆ (Maintenance Cost) ಇರೋದಿಲ್ಲ ಅಂತ ಹಲವರು ಅಂದುಕೊಳ್ಳುತ್ತಾರೆ. ಆದರೆ, ಅದು ನಿಮ್ಮ ತಪ್ಪು ಕಲ್ಪನೆ.
ಸ್ವಂತ ಮನೆಗೆ:
ವಾರ್ಷಿಕ ಕಂದಾಯ (Property Tax)
- ವಿದ್ಯುತ್ ಬಿಲ್
- ವಾಟರ್ ಬಿಲ್
- ಪೇಂಟಿಂಗ್
- ಬೋರ್‌ವೆಲ್ ಮತ್ತು ಪಂಪ್ ನಿರ್ವಹಣೆ
- ವೈರಿಂಗ್
- ಲೈಟಿಂಗ್
ಹೀಗೆ ಹತ್ತಾರು ಬಗೆಯ ಖರ್ಚುಗಳು ಬರುತ್ತವೆ.
ಬಾಡಿಗೆ ಮನೆಗೆ ಹೋಲಿಸಿದರೆ ಸ್ವಂತ ಮನೆಯ ನಿರ್ವಹಣಾ ವೆಚ್ಚ ಒಂದು ಸ್ವಲ್ಪ ಜಾಸ್ತಿನೇ ಇರುತ್ತೆ. ಈ ಖರ್ಚುಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತವೆ.
ಬಾಡಿಗೆ ಮನೆಯ ವೆಚ್ಚಗಳ ಲೆಕ್ಕಾಚಾರ: ಅಡ್ವಾನ್ಸ್ ಪಾವತಿ ಮತ್ತು ಮಾಸಿಕ ಬಾಡಿಗೆ
ಬಾಡಿಗೆ ಮನೆಯಲ್ಲಿ ವಾಸಿಸುವಾಗಲೂ ಕೆಲವು ವೆಚ್ಚಗಳು ಇರುತ್ತವೆ. ಮೊದಲು, ಅಡ್ವಾನ್ಸ್ ಅಥವಾ ಮುಂಗಡ ಪಾವತಿ ಮಾಡಬೇಕು. ಬೆಂಗಳೂರಿನಂತಹ ಮಹಾನಗರಗಳಲ್ಲಿ 6 ರಿಂದ 12 ತಿಂಗಳ ಬಾಡಿಗೆಯಷ್ಟು ಅಡ್ವಾನ್ಸ್ ಕೇಳುತ್ತಾರೆ. ಉದಾಹರಣೆಗೆ, ತಿಂಗಳಿಗೆ 20,000 ರೂಪಾಯಿ ಬಾಡಿಗೆಯಾದರೆ, 2.4 ಲಕ್ಷ ರೂಪಾಯಿ ಅಡ್ವಾನ್ಸ್ ಕೊಡಬೇಕಾಗುತ್ತೆ.
ಸ್ವಂತ ಮನೆಯ ಡೌನ್ ಪೇಮೆಂಟ್‌ಗೆ ಹೋಲಿಸಿದರೆ, ಬಾಡಿಗೆ ಮನೆಗೆ ಅಡ್ವಾನ್ಸ್ ಹೊಂದಿಸುವುದು ಸುಲಭ ಎಂದು ತುಂಬಾ ಜನರಿಗೆ ಅನ್ನಿಸಬಹುದು. ನಂತರ ಪ್ರತಿ ತಿಂಗಳು ಬಾಡಿಗೆ ಪಾವತಿಸಬೇಕು.
ನಿಮ್ಮ ಮನೆ ಬಾಡಿಗೆಗೆ ನೀಡಿದರೆ ಸಿಗುವ ಗಳಿಕೆ ಎಷ್ಟು?
ಮನೆ ಖರೀದಿ ಮಾಡುವ ಮುನ್ನ ಬಾಡಿಗೆ ಗಳಿಕೆ (Rental Yield) ಲೆಕ್ಕಾಚಾರ ಹಾಕಬೇಕು. ದೊಡ್ಡ ಮೊತ್ತ ಹೂಡಿಕೆ ಮಾಡಿ ಒಂದು ಮನೆ ಖರೀದಿಸಿದಾಗ, ಅದನ್ನು ಬಾಡಿಗೆಗೆ ನೀಡಿದರೆ ಅದರ ಮೇಲೆ ಎಷ್ಟು ಗಳಿಕೆ ಸಿಗುತ್ತೆ ಅನ್ನೋದು ಮುಖ್ಯ. ಭಾರತದಲ್ಲಿ ಬಾಡಿಗೆ ಗಳಿಕೆ ಸಾಮಾನ್ಯವಾಗಿ ಶೇಕಡಾ 3 ರಿಂದ 4 ರ ಆಸುಪಾಸಿನಲ್ಲಿದೆ.
ಅಂದರೆ, ನೀವು 60 ಲಕ್ಷದ ಮನೆ ಖರೀದಿಸಿ ತಿಂಗಳಿಗೆ 20,000 ಬಾಡಿಗೆಗೆ ಕೊಟ್ಟರೆ, ವಾರ್ಷಿಕ 2.40 ಲಕ್ಷ ಸಿಗುತ್ತೆ, ಅಂದರೆ ಕೇವಲ 4% ಗಳಿಕೆ. ಇದು ಹೂಡಿಕೆಯ ದೃಷ್ಟಿಯಿಂದ ಅಷ್ಟೇನೂ ಲಾಭದಾಯಕವಲ್ಲ.
ಗೃಹ ಸಾಲದಲ್ಲಿ ಅಸಲಿಗಿಂತ ಬಡ್ಡಿಯ ಹೊರೆಯೇ ಹೆಚ್ಚು!
ಗೃಹ ಸಾಲ ಪಡೆದಾಗ ಸಾಲದ ಅಸಲು ಮೊತ್ತಕ್ಕಿಂತ ಬಡ್ಡಿಯ ಹೊರೆಯೇ ಹೆಚ್ಚಿರುತ್ತದೆ. ಉದಾಹರಣೆಗೆ, 60 ಲಕ್ಷದ ಮನೆಗೆ 10 ಲಕ್ಷ ಡೌನ್ ಪೇಮೆಂಟ್ ಮಾಡಿ, 50 ಲಕ್ಷ ಹೋಂ ಲೋನ್ ಅನ್ನು ಶೇ. 9 ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಪಡೆದರೆ, ನೀವು ಒಟ್ಟು 1 ಕೋಟಿ 8 ಲಕ್ಷ ರೂಪಾಯಿ ಕಟ್ಟುತ್ತೀರಿ.
ಇದರಲ್ಲಿ 50 ಲಕ್ಷ ಅಸಲು ಮತ್ತು 58 ಲಕ್ಷ ಬಡ್ಡಿ ಆಗಿರುತ್ತದೆ. ಮಾಸಿಕ EMI 45,000 ರೂಪಾಯಿ ಆದರೂ, ಆರಂಭಿಕ ಹಂತದಲ್ಲಿ 40-42 ಸಾವಿರ ಬಡ್ಡಿಗೇ ಹೋಗಿಬಿಡುತ್ತದೆ. ಅಸಲಿಗೆ ಕಮ್ಮಿ ಹೋಗುತ್ತೆ.
ಕನಸಿನ ಮನೆ ಕೊಳ್ಳುವಾಗ ಹಣದ ದೊಡ್ಡ ಒತ್ತಡ!
ಸುಲಭವಾಗಿ ಸಿಗುವ ಗೃಹಸಾಲದ ನೆರವು ಪಡೆದು ಕನಸಿನ ಮನೆ ಕೊಳ್ಳಬೇಕು ಅನ್ನೋ ಆಸೆ ಹಲವರಿಗೆ ಇರುತ್ತೆ. ಇದಕ್ಕಾಗಿ ನಮ್ಮ ಉಳಿತಾಯದ ಹಣ, ಹೂಡಿಕೆಯ ಹಣವನ್ನು ಡೌನ್ ಪೇಮೆಂಟ್‌ಗೆ ಬಳಸುತ್ತೇವೆ.
ಆಗಲೂ ಶಾರ್ಟೇಜ್ ಆದ್ರೆ ಪೋಷಕರ ಸಹಾಯ ಪಡೆಯುತ್ತೇವೆ. ಆದರೆ, ಹೀಗೆ ಮಾಡಿದಾಗ ನಿವೃತ್ತಿ ಜೀವನ, ಮಕ್ಕಳ ಶಿಕ್ಷಣ, ತುರ್ತು ಅಗತ್ಯಗಳಿಗೆ (Emergency Fund) ಉಳಿತಾಯ ಇರೋದಿಲ್ಲ.
ಬ್ಯಾಂಕ್ ಬ್ಯಾಲೆನ್ಸ್ ಕೂಡ ಜೀರೋ ಆಗುತ್ತೆ. ಇಂದಿನ ಉದ್ಯೋಗ ಅನಿಶ್ಚಿತತೆಯ ಸಂದರ್ಭದಲ್ಲಿ ಈ ನಿರ್ಧಾರ ಹಣಕಾಸಿನ ಮೇಲೆ ದೊಡ್ಡ ಒತ್ತಡವನ್ನು (Pressure) ಸೃಷ್ಟಿಸಬಹುದು.
ಮನೆ ಖರೀದಿಸುವುದು ಬೇಡವೇ? ಯಾವಾಗ ನಿರ್ಧಾರ ಮಾಡಬೇಕು?
ಮನೆ ಖರೀದಿ ಮಾಡಲೇಬೇಡಿ ಅಂತ ನಾವು ಹೇಳುತ್ತಿಲ್ಲ.
ಇದು ಖಂಡಿತವಾಗಿಯೂ ಉತ್ತಮ ದೀರ್ಘಾವಧಿಯ ಹೂಡಿಕೆ.
ಬಾಡಿಗೆ ಕಟ್ಟುವ ತಲೆನೋವು ತಪ್ಪುತ್ತೆ ಮತ್ತು ಆಸ್ತಿಯ ಮೌಲ್ಯ ಹೆಚ್ಚಾಗುತ್ತೆ. ಆದರೆ, ಮನೆ ಕೊಳ್ಳುವಾಗ ಒಂದಷ್ಟು ಪೂರ್ವ ತಯಾರಿ ಮತ್ತು ಸರಿಯಾದ ಲೆಕ್ಕಾಚಾರ ಇರಬೇಕು.
ಮನೆ ಮೌಲ್ಯದ 20-40% ನಷ್ಟು ಡೌನ್ ಪೇಮೆಂಟ್ ಮಾಡುವಷ್ಟು ಸಾಮರ್ಥ್ಯ ಮತ್ತು ಅದರ ಎರಡು ಪಟ್ಟು ಇನ್ನಿತರ ಆಸ್ತಿ ಇದ್ದರೆ ಮನೆ ಖರೀದಿಗೆ ಮುಂದಾಗಬಹುದು. ಇಬ್ಬರು ದುಡಿಯುತ್ತಿದ್ದರೆ ಇದು ಸುಲಭ.
22-24ನೇ ವಯಸ್ಸಿನಲ್ಲಿ ಮನೆ ಖರೀದಿಯಂತಹ ದೊಡ್ಡ ನಿರ್ಧಾರ ಮಾಡಬೇಡಿ.
ಮೊದಲ ಮನೆ ಖರೀದಿಗೆ 5-20-40 ನಿಯಮ: ನೆಮ್ಮದಿಯ ಜೀವನಕ್ಕೆ ಮಾರ್ಗ:
ಮನೆ ಖರೀದಿ ಮಾಡುವಾಗ ‘5-20-40‘ ನಿಯಮ ಪಾಲಿಸುವುದು ಬಹಳ ಮುಖ್ಯ. ಇದು ನಿಮ್ಮ ಕನಸಿನ ಮನೆ ನೆಮ್ಮದಿಯ ತಾಣವಾಗಲು ಸಹಾಯ ಮಾಡುತ್ತದೆ. ಹಾಗಾದರೆ, ಈ ನಿಯಮ ಏನು ಹೇಳುತ್ತೆ ನೋಡೋಣ:
5-20-40 ನಿಯಮದ ಪ್ರಾಕ್ಟಿಕಲ್ ಲೆಕ್ಕಾಚಾರ:
- ನಿಮ್ಮ ಮನೆ ಮೌಲ್ಯ ನಿಮ್ಮ ಕುಟುಂಬದ ವಾರ್ಷಿಕ ಆದಾಯದ 5 ಪಟ್ಟಿಗಿಂತ ಜಾಸ್ತಿ ಇರಬಾರದು. ಉದಾಹರಣೆಗೆ, 12 ಲಕ್ಷ ವಾರ್ಷಿಕ ಆದಾಯ ಇದ್ದರೆ, ಮನೆಯ ಮೌಲ್ಯ 60 ಲಕ್ಷಕ್ಕಿಂತ ಹೆಚ್ಚಿರಬಾರದು.
- ಗೃಹ ಸಾಲದ ಅವಧಿ 20 ವರ್ಷಗಳನ್ನು ಮೀರಬಾರದು. 20 ವರ್ಷದ ಒಳಗೇ ಸಾಲ ತೀರಿಸುವ ಯೋಜನೆ ಇರಬೇಕು.
- ನಿಮ್ಮ ಮಾಸಿಕ EMI ಮೊತ್ತ ನಿಮ್ಮ ಕುಟುಂಬದ ಒಟ್ಟು ಆದಾಯದ 40% ಗಿಂತ ಹೆಚ್ಚು ಇರಬಾರದು. 1 ಲಕ್ಷ ಮಾಸಿಕ ಆದಾಯ ಇದ್ದರೆ, 40 ಸಾವಿರಕ್ಕಿಂತ ಹೆಚ್ಚು EMI ಆಗಬಾರದು.
ಇದನ್ನು ಓದಿ:
ಮನೆ ಸಾಲ: 50 ಲಕ್ಷಕ್ಕೆ 54 ಲಕ್ಷ ಬಡ್ಡಿ ಏನಿದು? ನಿಮಗೆ ಗೊತ್ತಿರಲೇಬೇಕಾದ ಗುಟ್ಟುಗಳು